ಸೋಮವಾರ, ಮೇ 24, 2021

ಪತ್ತನಾಜೆ ತುಳುನಾಡಿನ ಪರಂಪರೆಯ ಒಂದು ಭಾಗ.

 ತುಳುನಾಡು ಭೌಗೋಳಿಕವಾಗಿ ವೈವಿಧ್ಯಮಯವಾದದ್ದು.  ಪತ್ತನಾಜೆ ಎಂಬುದು ತುಳುನಾಡಿನಲ್ಲಿ ನಡೆಯುವ  ಆಟ, ಅಯನ, ಕೋಲ, ಜಾತ್ರೆ ಮುಂತಾದ ಕಾರ್ಯಕ್ರಮಗಳಿಗೆ  ವಿರಾಮವನ್ನು ನೀಡುವ ದಿನ. ಇದು ತುಳುವರೆ ಸ್ವತಃ ಅವರಿಗಾಗಿಯೇ, ಅವರಿಂದಲೆ ಮಾಡಿಕೊಂಡು ನಿಯಮಗಳು.   ಪ್ರಕೃತಿಯೊಂದಿಗಿನ ಅನುಸಂದಾನದಲ್ಲಿ ಕಲಿತ, ಕಾಲಜ್ಞಾನವನ್ನು ಸಮೀಕರಿಸಿ ವಿಧಿಸಿಕೊಂಡ ಗಡು. ಇದು ತುಳು ಕಾಲ ನಿರ್ಣಾಯದಂತೆ ಸೌರಮಾನದ ಎರಡನೇ ತಿಂಗಳಾಗಿರುವ ಬೇಸದ(ಹತ್ತನೇಯ ದಿನ) ಬರುತ್ತದೆ. ತುಳು ಮಾಸದ ಬೇಸ ಹತ್ತರಂದು (ಮೇ  ತಿಂಗಳ 24  ಅಥವಾ 25) ಪತ್ತನಾಜೆ . 
 ಈ ಆಚರಣೆಯು ಪ್ರಕೃತಿ ಮತ್ತು ಸಂಸ್ಕೃತಿಯನ್ನು ಸಮ್ಮಿಲನಗೊಳಿಸುತ್ತದೆ. ಪ್ರಕೃತಿ ಬದಲಾವಣೆಗೆ ಸ್ಪಂದಿಸುವ ತುಳುನಾಡಿನ ವಿಧಿ ಮತ್ತು ನಿಷೇಧಗಳನ್ನು ಅಳವಡಿಸಿ ಪ್ರಕೃತಿಯೊಂದಿಗೆ ತನ್ನ ಸಂಸ್ಕಾರವನ್ನು ಬೆಳೆಸಿಕೊಂಡಿದ್ದಾನೆ. ಇಲ್ಲಿ  ಧಾರ್ಮಿಕವಾಗಿ ನೂರಾರು ಜನ ಒಂದು ಕಡೆ ಸೇರಿ ಕೋಲ, ಜಾತ್ರೆ, ಕಂಬಳ, ಆಟಗಳಿಗೆ ಸಂಪೂರ್ಣ ನಿಷೇಧದ ಪರದೆ ಬೀಳುತ್ತದೆ. ಉಳಿದಂತೆ ತಂಬಿಲ, ತಾಳಮದ್ದಳೆಗಳು ನಡೆಯುತ್ತವೆ. ತುಳುವರು ಒಂದು ಕಡೆ ಸೇರಿ ಕೃಷಿ ಕೆಲಸ, ಚಟುವಟಿಕೆಯಲ್ಲಿ ತೊಡಗಿರುತ್ತಾರೆ, ಕೋಲ ಅಯನೊವೆಂದು ಕಳೆಯುವ ಕಾಲವನ್ನು ಮರೆಯುತ್ತಾರೆ, ಎಂದು ಹಿರಿತಲೆಮಾರುಗಳು ಹಾಕಿಕೊಟ್ಟ ಪಥವನ್ನು ಎಂದು ತಪ್ಪಲಾರರು. 

     ತುಳುವರ ಹೊಸ ವರುಷ ಬಿಸುವಿನಂದು, ಸೌರಮಾನದ ಮೊದಲ ತಿಂಗಳಾದ ಪಗ್ಗುವಿನ ಮೊದಲ ದಿನ, ಪಗ್ಗು ತಿಂಗಳ ಹದಿನೆಂಟನೇಯ ದಿನ(ಪಗ್ಗು ಪದಿನೆನ್ಮ) ಎಲ್ಲವೂ ಕೃಷಿ ಚಟುವಟಿಕೆಗಳಿಗೆ ಬುನಾದಿ ಹಾಕುವ ದಿನಗಳು(ಬರೆ ಹಾಕುವ ದಿನ) ಆಗಿರುತ್ತದೆ. ಬೇಸ ತಿಂಗಳಾಗುವಾಗ ಒಂದಷ್ಟು ಮಳೆ ಬಂದು ಹದವಾದ ಭೂಮಿ ಕೃಷಿಗೆ ಸಿದ್ದವಾಗಿರುತ್ತದೆ. ಈ ಆಚರಣೆಯ ಕೊಂಡಿಗಳು ಒಂದೊದು ಆವರಿಸಿ ಆರಾಧನೆ, ನಂಬಿಕೆಯ ನೆಲೆಯನ್ನು ನಿರೂಪಿಸಿದೆ.

ಪದಾರ್ಥ

ಪತ್ತನಾಜೆಯು ಎರಡು ಶಬ‍್ಧಗಳಿಂದಾಗಿದೆ. ಪತ್ತ್+ನ್+ಅ(ಆ)ಜೆ. ಪತ್ತ್ ಅಂದರೆ ಸಂಖ್ಯೆ ಹತ್ತು ಇದು ಬೇಷ ತಿಂಗೊಲ ಪತ್ತ್, ಪತ್ತುನಾನಿ(ಬೇಸ ತಿಂಗಳ ಹತ್ತನೆಯ ದಿನ) ಅಜೆ ಅಂದರೆ ಹೆಜ್ಜೆ ಎಂದು ಹೇಳಬಹುದು.

     ಪತ್ತನಾಜೆ - ಬೇಸ ಪತ್ತುತ್(ಪತ್ತು ಅಂದರೆ ಹತ್ತನೇಯ ದಿನ)  ಪತ್ತ್‌ನೆತ ದಿನೊ.

   ಪತ್ತನಾಜೆ -  ಪತ್ತ್ ಎಂದರೆ ಹತ್ತು ದಿನ ಹಿಡಿದುಕೊಳ್ಳುವುದು, ಹಿಡಿದಿಟ್ಟಿರುವುದು. 'ಆಜೆ' ಅಂದರೆ ಪ್ರಮಾಣ ಮಾಡುವುದು ಎಂದರ್ಥ.  ಆಜೆ ನೀರಿಗೆ ಸಂಬಂಧ ಪಟ್ಟಂತಹ ಜಲವಾಚಕ( ಜಲವಾಚಕ ಶಬ್ಧ - ಕಜೆ)  ಶಬ್ಧವಾಗಿದೆ.  ತುಳುನಾಡಿನ ಅಲ್ಲಲ್ಲಿ ಸ್ಥಳನಾಮವಾಗಿ ಬಳಕೆಯಾಗಿದೆ. ನೀರನ್ನು ಭೂಮಿ ತುಂಬಿರುವ, ನೀರನ್ನು ಹಿಡಿದಿರುವ ಎಂಬ ಅರ್ಥ ಕಲ್ಪಿಸಬಹುದು. ಕಾಲ, ಸಮಯ, ಜಾಗ, ಹವಾಮಾನದ ಗುಣಗಳನ್ನು ಇಲ್ಲಿ  ಗಣನೆಗೆ ತೆಗೆದುಕೊಳ್ಳಬೇಕು. ಈ ಎರಡು ಶಬ್ದಗಳನ್ನು ಅದಲು ಬದಲು ಮಾಡಿದಾಗ ಆಜೆ ಪತ್ತ್ ಆಗಬಹುದು. ಇದು ನೀರನ್ನು ಹಿಡಿದಿಡು ಎಂಬ ಅರ್ಥವನ್ನು ಕೊಡಬಹುದು.  ಸ್ಥಳನಾಮದ ನೆಲೆಯಲ್ಲಿ   ಅಜಕ್ಕಳ, ಕಜೆಗದ್ದೆ, ಅಜಡ್ಕ ಈ ಸ್ಥಳದ ಹಿನ್ನೆಲೆಯನ್ನು ಭಾಷಾವಿಜ್ಞಾನದ ನೆಲೆಯಲ್ಲಿ ಗಮನಿಸಬಹುದು.

  ಇದನ್ನು ಆಚರಣೆಯ ನೆಲೆಯಲ್ಲಿ ಪ್ರತಿನಿಧಿಕರಿಸುವುದಾದರೆ ಪತ್ತನಾಜೆ ಎಲ್ಲ ಮುಂದೆ ಬರುವ ಕಾರ್ಯಗಳಿಗೆ ಗಡುವಾಗಿದೆ, ಪತ್ತನಾಜೆಯ ದಿನದವರೆಗೆ ಆಡಿದ ಆಟ(ಯಕ್ಷಗಾನ), ಕುಣಿತ, ಆರಾಧನಾ ಕುಣಿತಗಳು, ದೇವರ ದರ್ಶನ ಬಲಿ ಗಳು ಮುಂದಿನ ದಿನಗಳಲ್ಲಿ ಇಲ್ಲವೆಂದು ನಿರ್ದಿಷ್ಟ ಸಂದೇಶದೊಂದಿಗೆ ಸೀಮಾ ರೇಖೆಯನ್ನು ಎಳೆದು  ಬಿಡುತ್ತದೆ. ಮರುದಿನದಿಂದ ಯಾವುದೆ ವಿಶೇಷ ಕಾರ್ಯಗಳು ನಡೆಯದುದರಿಂದ, ಈ ದಿನ ಅಜಕಳ ಮಾಡಿದಂತೆ ಕೊಂಡಿಯನ್ನು ತುಂಡು ಮಾಡುತ್ತದೆ.

     ಪತ್ತ‍ನಾಜೆ - ಪತ್ತ್  ಎಂದರೆ ಹತ್ತು, ಆಜೆ ಎಂದರೆ ಹೆಜ್ಜೆ ಎಂದಾಗಿದೆ.  ಹತ್ತು ಜನ ಸೇರಿ ನಡೆಸುವಂತಹ ಕ್ರಮವಾಗಿದೆ. ಸಂಖ್ಯಾ ಜಾನಪದದ ನೆಲೆಯಲ್ಲಿ ನೋಡುವುದಾದೆ ಅದೆ ರೀತಿ ಹತ್ತು ಮನೆಯವರು, ಹತ್ತು ಕುಟುಂಬ, ಹತ್ತು ಜನ ಇದ್ದುಕೊಂಡು ಮಾಡುವ ತಂಬಿಲ, ಕಾರ್ಯ ಎಂದರೂ ತಪ್ಪಗಾದು.

         ಪತ್ತನಾಜೆ ಪದವನ್ನು ವಿಶ್ಲೇಷಿಸಿದಾಗ ಪೂರ್ವ ಪದವು ಪತ್ತ್- ಹಿಡಿಯು ಎಂಬ ಅರ್ಥ ಕೊಟ್ಟರೆ ಉತ್ತರಪದ ಅಜಪು- ಬೇರ್ಪಡಿಸು ಎಂಬ ಅರ್ಥದಿಂದ ಕೂಡಿದೆ. ಪತ್ತುನಲ(ಹಿಡಿಯು) ಮತ್ತು  ಅಜಪುನಲ(ಬೇರ್ಪಡಿಸು) ಎಂಬ ದ್ವಂದ್ವ ಪದ ವಿನ್ಯಾಸ ನೋಡಬಹುದು. ಪತ್ತ್‌ನೆನ್ ಬುಡುಪಾಪುನಾ, ಬೂತ ಪತ್ತುನೆನ್ ಬೂಡುಪಾಪುನ(ಹಿಡಿದ ಬೂತವನ್ನು ಬಿಡಿಸುವುದು) ಎಂಬ ಮಾತು ಇದೆ.

ಆಚರಣೆ

ಪತ್ತನಾಜೆಯಂದು ತರವಾಡು ಮನೆಯಲ್ಲಿ ಕುಟುಂಬವರೆಲ್ಲ ಸೇರಿ "ಬೂತೊಗು ಕರಿಪುನ" ಎಂಬ ಬೂತ  ತಂಬಿಲ ನಡೆಸುತ್ತಾರೆ. ಇದು ಹೆಚ್ಚಾಗಿ ಹಗಲು, ರಾತ್ರಿ  ಹೊತ್ತಿನಲ್ಲಿ ನಡೆಯುತ್ತದೆ. "ಕರಿದ್ ಪೊಯಿನಕುಲೆಗ್ ಕರಿಪುನಾ" (ಕಳೆದು ಹೋದವರಿಗೆ ಬಡಿಸುವುದು) ಎಂಬ ಕ್ರಮ ಸಂಜೆ ಏರು ಹೊತ್ತಿನಲ್ಲಿ ನಡೆಸುತ್ತಾರೆ. ಗುಳಿಗನ ಕಲ್ಲು, ಬೈರವನ ಕಲ್ಲುಗಳಲ್ಲಿ ಪತ್ತನಾಜೆ ದಿನ ಬಡಿಸುವ "ಪತ್ತನಾಜೆ ಕರಿಪುನ" ಎಂದು ತಂಬಿಲ ಕಟ್ಟುತ್ತಾರೆ. ಗುಳಿಗ ದೈವ ಜನರಿಗೆ ಬರುವ ರೋಗಳಿಂದ ಕಾಪಾಡುತ್ತಾನೆ. ಬೈರವನು ಜಾನುವಾರುಗಳಿಗೆ ಬರುವ ತೊಂದರೆಯನ್ನು ನಿವಾರಿಸುತ್ತಾನೆ ಎನ್ನುವ ನಂಬಿಕೆ ತುಳುವರಲ್ಲಿದೆ.  ಜೊತೆಗೆ ವನದಲ್ಲಿ ಬಡಿಸುವುದು, ಜಾಗೆತೆಗ್ ಬಳಸುನ (ಜಾಗೆಯ ಶಕ್ತಿಗೆ ಬಡಿಸುವುದು) ಎಂಬ ಕ್ರಮಗಳನ್ನು ಮಾಡುತ್ತಾರೆ.

      ಪತ್ತನಾಜೆಯ ದಿನ ಜಾತ್ರೆಯ ಕೊಡಿ ಇಳಿಯಬೇಕು, ಗದ್ದೆಯ ಕೊಡಿ(ಮೊಳಕೆ) ಏರಬೇಕು. ದೈವದೇವರನ್ನು ಘಟ್ಟಕ್ಕೆ ಹೋಗುತ್ತಾರೆ, ಊರು ಕಾಯಲು ಗುಳಿಗ, ಕಲ್ಲುರ್ಟಿಗಳಂತಹ ಬಂಟ ದೈವಗಳಿರುತ್ತವೆ. ಯಕ್ಷಗಾನದ ಗೆಜ್ಜೆ ಬಿಚ್ಚಬೇಕು, ಕಲಾವಿದನೂ ಗದ್ದೆಗೆ ಇಳಿಯಬೇಕು. ಅಲಫಲ(ಗೇರು, ಹಲಸು, ಮಾವು ಇತ್ಯಾದಿ)ಗಳ ವ್ಯಾಮೋಹ ಬಿಡಬೇಕು. ಲೌಕಿಕ ಭಾವದ ಜೊತೆಗೆ ಪ್ರಕೃತಿ 'ಪತ್ತ್ ಪನಿ' (ಹತ್ತು ಹನಿ) ಮಳೆಯನ್ನೂ ಸುರಿಸಬೇಕು. ಇದೇ ಬೇಸ ಹತ್ತರ ಪ್ರಮಾಣ.

ಪತ್ತನಾಜೆ ಅಂದರೆ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳನ್ನು ನಿಲ್ಲಿಸಿ ಬೇಸಾಯದ ಕೆಲಸಕ್ಕೆ ತೊಡಗಿಕೊಳ್ಳುವ ತುಳು ಜನಪದರ ಕಾಲ್ಪನಿಕ ಮತ್ತು ಆಚರಣಾತ್ಮಕ ಪರಿಕಲ್ಪನೆಯೇ ಈ ''ಬೇಸ ಹತ್ತು''. ಆಚರಣೆಯ ನೆಲೆಯಿಂದಲೂ ನೋಡುವುದಾದರೆ ಈ ದಿನದ ನಂತರದ ದಿನಗಳಲ್ಲಿ ಮುಖ್ಯವಾಗಿ ಕುಣಿತ, ನರ್ತನಗಳು ಇರುವುದಿಲ್ಲ. ಅದರೆ ಮದುವೆ, ಪೂಜೆ, ಇತರ ಸಾಂಸ್ಕೃತಿಕ ಕ್ರಮಗಳು ನಡೆಯುತ್ತದೆ.   ದೈವಗಳನ್ನು ಆರಾಧಿಸುವರಿಗೆ, ಪಾಲಿಸುವವರಿಗೆ, ಚಾಕರಿಯವರಿಗೆ ವಿಶ್ರಾಂತಿ ಸಿಗುತ್ತದೆ. ಈ ದಿನಗಳಲ್ಲಿ ಪ್ರಕೃತಿಯೊಂದಿಗೆ ಬೆರೆತು ಪ್ರಕೃತಿಯ ಅನುಸಂದಾನ ಮಾಡಿಕೊಂಡು ಬದುಕಲು ಮಾನಸಿಕವಾಗಿ ತಯಾರು ಮಾಡುತ್ತದೆ. ನೈಜತೆಯ ನಂಬಿಕೆಗಳನ್ನು ಬೆರಸಿಕೊಂಡು  ಸಮಯ, ದಿನ, ಕಾಲ, ಹವಾಮಾನ,  ಸ್ಥಳಗಳನ್ನು ಒಂದಾಗಿಸಿಕೊಂಡು ಸೀಮಾರೇಖೆಗಳನ್ನು ಸಾಂಸ್ಕೃತಿಕವಾಗಿ ನೊಡುವ ಪತ್ತನಾಜೆ ಬೇಸ ಪತ್ತುನ ಪತ್ತೆನಾನಿ(ಬೇಸ ತಿಂಗಳು ಹಿಡಿದು ಹತ್ತನೇಯ ದಿನ) ಬರುತ್ತದೆ ಅದರೆ ಸಾಂಸ್ಕೃತಿಕ ಶಬ್ಧವಾದ ಇದನ್ನು ಹತ್ತನಾವಧಿ(ಕುಂದಗನ್ನಡದಲ್ಲಿ ಬಳಕೆ ಇರಬಹುದು ಏನೋ ??!) ಎಂದು ಕನ್ನಡಕ್ಕೆ ತರ್ಜುಮೆ ಮಾಡುವುದು ಸರಿಯಾದ ಕ್ರಮವಲ್ಲ

ದೈವ/ ಭೂತಗಳಿಗೆ ತೆರೆ

ತುಳುನಾಡಿನಲ್ಲಿ ನಡೆಯುವ ದೈವಾರಾಧನೆಯ ಭಾಗವಾದ ನೇಮ, ಕೋಲ, ಮೆಚ್ಚಿ, ಬಂಡಿಗಳಿಗೆ ಪತ್ತನಾಜೆಯು ಒಂದು  ತಡೆಯಾಗಿದೆ. ಕುಟುಂಬದ ದೈವ, ಗ್ರಾಮ ದೈವ,  ಅರಸು ದೈವಗಳ ಪರ್ವಗಳನ್ನು ಈ ದಿನಕ್ಕಿಂತ ಮೊದಲು ಮುಗಿಸಬೇಕು. ರಾಜನ್(ಶಿರಾಡಿ) ದೈವಗಳಿಗೆ ಅದೆ ದಿನ ಸೇವೆ ನೆಡೆಯುತ್ತದೆ. ಬಳಿಕ ಎಲ್ಲಿಯೂ ನೇಮ ಕಟ್ಟುವಂತಿಲ್ಲ, ಗಗ್ಗರವನ್ನು ಬಿಚ್ಚುವುದು.  ಎಂಬ ಕಟ್ಟುನಿಟ್ಟಿನ ಅಘೋಷಿತ ನಿಯಮಗಳನ್ನು ತುಳುವರು ಹಾಕಿಕೊಂಡಿರುತ್ತಾರೆ. ತುಳುನಾಡಿನ ಯಾವುದೆ ಮನೆಗಳಲ್ಲಿ ಪತ್ತನಾಜೆಯು ನಂತರದ ದಿನಗಳಲ್ಲಿ ಧೈವಗಳ ಆರಾಧನೆಯು ನಡೆಯುವುದಿಲ್ಲ, ಅದೇ ರೀತಿ ನೇಮ ಕಟ್ಟುವವರು ನೇಮ ನಡೆಸಲು ಒಪ್ಪಿಕೊಳ್ಳುವುದು ಇಲ್ಲ. ಪತ್ತನಾಜೆಯ ನಂತರ ಭೂತಗಳು ಘಟ್ಟ ಹತ್ತುತ್ತವೆ ಎಂಬ ಮಾತಿದೆ.

                                            ಕೋಪಾಯನ ಗಗ್ಗರ

     ಇದುವರೆಗೂ ಆಟ, ಭೂತ, ನೇಮ, ಮುದುವೆ ಎಂದು ಓಡಾಡುತ್ತಿದ್ದವರನ್ನೆಲ್ಲ ಒಂದೆಡೆ ಹಿಡಿದು ನಿಲ್ಲಿಸುವ ಒಂದು ದಿನ ಪತ್ತನಾಜೆ. ಹೀಗೆ ಅನಾದಿಕಾಲದಿಂದ ಬದಲಾಗದೇ ಹಿಡಿದಿಟ್ಟ ಪತ್ತೆನ ಆಜೆ ಈಗ (ಅ)ಸಹಜವಾಗಿಯೇ ಬದಲಾಗಿದೆ. ಅಂದರೆ ಗದ್ದೆಗಳಿಲ್ಲದೇ ಬೇಸಾಯ ಮರೆತ ಜನ, ಹಿಂದಿನ ಜನಪದ ಶಿಷ್ಟಾಚಾರಗಳು ನಿಂತು ಹೋದ ಈ ಕಾಲದಲ್ಲೂ  ಕಾಲಾವಧಿ ಉತ್ಸವವನ್ನು ಕೊನೆಗೊಳಿಸುವ, ಯಕ್ಷಗಾನ ಮೇಳಗಳು ಒಂದು ಹೊತ್ತು ನಿಲ್ಲುವ ಔಪಚಾರಿಕ ಪ್ರಕ್ರಿಯೆಯೊಂದು ನಡೆಯುತ್ತದೆ.  

    ಅನೇಕ ವರ್ಷಗಳಿಂದ ಬೇಸಾಯ ಕಡಿಮೆಯಾದದಷ್ಟೆ ಅಲ್ಲ,  ಜನರ ಸಾಂಸ್ಕೃತಿಕ- ಆಚರಣಾತ್ಮಕ ಬದುಕು ನಿಂತಿದೆ. ಇಂದು ಬೀಳಬೇಕಾದ ಹತ್ತು ಹನಿ ಮಳೆಯು, ಕಾಲಾಂತರದಲ್ಲಿ ಪ್ರವಾಹದಂತೆ  ಬೀಳಿಸಿ ಹೋಗಿದೆ. 

ಗೆಜ್ಜೆ ಬಿಚ್ಚುವುದು:

       ತುಳುನಾಡಿನಾದ್ಯಂತ  ನಡೆಯುತ್ತಿದ್ದ ಆರಾಧನೆಗಳು, ದೇವಸ್ಥಾನಗಳು ನಡೆಸಿಕೊಂಡು ಬರುತ್ತಿರುವ ನೂರಾರು ಯಕ್ಷಗಾನ ಮೇಳಗಳು, ತಮ್ಮ ತಿರುಗಾಟದ ಆಟಗಳನ್ನು ನಿಲ್ಲಿಸುತ್ತವೆ. ಇದಕ್ಕೆ "ಗೆಜ್ಜೆ ಬಿಚ್ಚುವುದು" ಎಂದು ಕರೆಯುತ್ತಾರೆ. ತಿರುಗಾಟ ಮುಗಿಸುವ ಕಡೆಯ ದಿನ, ಆಟ ಆಡಿ ಗೆಜ್ಜೆ ಕಳಚಿ ಪೂಜೆ ಸಲ್ಲಿಸಿ ತಿರುಗಾಟದ ಮುಕ್ತಾಯ ಮಾಡುತ್ತಾರೆ. ಮತ್ತೆ ಮುಂದೆ ಬರುವ ದೀಪಾವಳಿಯ ಸಂದರ್ಭದಲ್ಲಿ ದೇವಸ್ಥಾನಗಳ ಮೇಳಗಳ ಕಲಾವಿದರು ದೇವರ ಎದುರು ನಾಟ್ಯ ಪ್ರದರ್ಶನ ಮಾಡಿ ಆಟದ ಸೇವೆಯನ್ನು ಆರಂಭಿಸುತ್ತಾರೆ. ಪತ್ತನಾಜೆ ಬತ್ತುಂಡು ಜತ್ತಿ ಆಟೊ ಉಂತ್‍ಂಡ್ (ಪತ್ತನಾಜೆ ಬಂದಿತು ತಿರುಗಾಟಕ್ಕೆ ಹೊರಟ ಮೇಳ ನಿಂತಿತು) ಎಂಬ ಮಾತು ಯಕ್ಷಗಾನ ಬಗೆಗೆ ಚಾಲ್ತಿಯಲ್ಲಿದೆ.

ಮಳೆಗಾಲಕ್ಕೆ ಮುನ್ನುಡಿ

         "ಪತ್ತನಾಜೆತಾನಿ ಪತ್ತ್ ಪನಿ ಬರ್ಸೊ ಬೂರೊಡು" ಪತ್ತನಾಜೆ ಹತ್ತು ಹನಿ ಮಳೆ ಬೀಳಬೇಕು ಎಂಬ ನಂಬಿಕೆ ಇದೆ. ಪತ್ತನಾಜೆಗಿಂತ ಮೊದಲು ಬಿಸುವಿನ ಸಮಯದಲ್ಲಿ, ಅಲ್ಲಲ್ಲಿ ಜಾತ್ರೆ ,ಕೋಲ ನಡೆಯುತ್ತವೆ. ಅ ಊರಿನವರ ನಂಬಿಕೆಯಂತೆ, ತಮ್ಮ ಗ್ರಾಮ, ಸೀಮೆಯ ಜಾತ್ರೆ, ಕೋಲದಂದು ನಾಲ್ಕು ಹನಿ ಮಳೆ ಬರುತ್ತದೆ ಎಂಬ ನಂಬಿಕೆ ಇದೆ.  

ತುಳುವರ 'ಬಿಸು', ವಿಷು(ಪಗ್ಗು1, ಏಪ್ರೀಲ್ 14) ವಾರ್ಷಿಕಾವರ್ತನದ ಮೊದಲ ದಿನ. ಜೊತೆಗೆ ಭತ್ತದ ಬೇಸಾಯ ಆರಂಭದ ಸಾಂಕೇತಿಕ ದಿನವೂ ಹೌದು. ಆ ದಿನ ಭತ್ತದ ಗದ್ದೆ ಉಳುವ, ಗೊಬ್ಬರ ಹಾಕುವ, ಬೀಜ ಬಿತ್ತವ ಕ್ರಮಗಳು ನಡೆಯುತ್ತವೆ.  ಮಳೆಯ ಮೋಡಗಳು ನಿಧಾನಕ್ಕೆ ಚಲಿಸಲು ಆರಂಭಿಸಿವ ಕಾಲ. ಅದೇ ಚಲಿಸುವ ಮೋಡ ಘನೀಭವಿಸುವ ಸಾಮಾನ್ಯ ಕಾಲವೇ 'ಪಗ್ಗು ಪದ್ಣೆಮ್ಮೊ' (ಪಗ್ಗು ಹದಿನೆಂಟು ಅಂದರೆ (ಮೇ ತಿಂಗಳ 1) ಕೈಬಿತ್ತು ಹಾಕುವ(ಬೀಜ ಬಿತ್ತುವ)ದಿನ. ಏಣಿಲು ಬೆಳೆಗೆ ಬೇಕಾಗುವ ಬತ್ತದ ಸಸಿ(ನೇಜಿ) ತಯಾರಿ ಪ್ರಕ್ರಿಯೆಗೆ ಮಹೂರ್ತ ನಿಗದಿಯಾಗುವುದೇ ಇಲ್ಲಿಂದ.  ಹೀಗೆ ಬಿತ್ತಿದ ಬೀಜ ಮೊಳಕೆ ಒಡೆದು ನಾಟಿ ಮಾಡಲು ಹೆಚ್ಚು ಕಡಿಮೆ ಒಂದು ತಿಂಗಳಂತೂ ಬೇಕು, ಜೊತೆಗೆ ಮಳೆಯೂ ಕೈ ಹಿಡಿಯಬೇಕು. ಆ ಸಾಂಕೇತಿಕ ಮಳೆ ಬೀಳುವ, ಮೊಳೆತ ನೇಜಿ (ಸಸಿ)ಯನ್ನು ಕಿತ್ತು ನೆಡಬಹುದಾದ ಗಡು ದಿನವೇ ಈ ಪತ್ತನಾಜೆ.

ಕೆಲಸ :

ಭೂತಾರಾಧನೆಯ ಭೂತ ಕಟ್ಟುವ ಜನಾಂಗಗಳಾದ, ಪರವ, ನಲಿಕೆಯವರಿಗೆ ಪತ್ತನಾಜೆಯವರೆಗೆ ಮಾಣಿಗಳಾಗಿರುತ್ತಾರೆ. ನಂತರ ದಿನಗಳಲ್ಲಿ  ಪರ್ಯಾಯ ಕೆಲಸಗಳನ್ನು ಅವರು ಆರಿಸಿಕೊಳ್ಳಬೇಕಾಗುತ್ತದೆ. ಅದರಂತೆ ಅಲ್ಲಿನ ಯಕ್ಷಗಾನ ಪಾತ್ರಧಾರಿಗಳು ಮುಂದಿನ ವರ್ಷದ ಆಟಕ್ಕೆ ಬೇಕಾದ ತಯಾರಿಯನ್ನು  ಮಾಡಿಕೊಳ್ಳುತ್ತಾರೆ. ದೈವ ಕಟ್ಟುವ ಕಲಾವಿದರು ಅಟಿ,ಸೋಣ ತಿಂಗಳಲ್ಲಿ ಬರುವ ಕುಣಿತ ಗಳನ್ನು ನಡೆಸುತ್ತಾರೆ. ದೈವಕ್ಕೆ ಬೇಕಾದ ವಸ್ತುಗಳನ್ನು ತಯಾರಿಸುತ್ತಾರೆ.

ಪತ್ತನಾಜೆಯ  ನಂಬಿಕೆಗಳು.

  • `ತುಳುನಾಡಿನಲ್ಲಿ   ಎರ್ಮಾಳು ಜಪ್ಪು ಖಂಡೇವು ಅಡೆಪು’ ಎಂಬ ಗಾದೆಯಂತೆ ಅಕ್ಟೋಬರ್ ಅಥವಾ ನವಂಬರ್ ತಿಂಗಳಿನಲ್ಲಿ ಎರ್ಮಾಳಿನಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಮೂಲಕ ಆ ಸೀಮೆಯ ಉತ್ಸವಗಳು ಆರಂಭಗೊಂಡು ಮೇ ತಿಂಗಳಿನ ಮೇಷ ಸಂಕ್ರಮಣದಂದು ಪಾವಂಜೆ ಸಮೀಪದ ಖಂಡೇವುನಲ್ಲಿ  ನಡೆಯುವ ಮೀನು ಹಿಡಿಯುವ ಖಂಡೇವು ಜಾತ್ರೆ ಮೂಲಕ ಸಂಪನ್ನಗೊಳ್ಳುತ್ತದೆ. 
  • ಪತ್ತನಾಜೆ ಬತ್ತ್Oಡ್  ಜತ್ತಿ ಆಟೊ ಉಂತ್Oಡ್ (ಪತ್ತನಾಜ್ ಬಂದಿತು (ತಿರುಗಾಟಕ್ಕೆ) ಹೊರಟ ಆಟ (ಯಕ್ಷಗಾನ ಮೇಳದವರ ಆಟ) ನಿಂತಿತು
  •  ಪತ್ತನಾಜೆದಾನಿ ಪತ್ತ್ ಪನಿ ಬರ್ಸೊ ಬರೋಡು ಇಜ್ಜಂಡ್ ಊರುಗು ಗಂಡಾಂತರ ಉಂಡು’ ಎಂಬುದು ತುಳುವರ ನಂಬಿಕೆಯಾಗಿತ್ತು.
  • ಮನೆಯಿಂದ ಯಾರಾದರೂ ಕೆಲಸದ ನಿಮಿತ್ತ ದೂರದ ಊರಿಗೆ ಹೋಗಿದ್ದರೆ ಅವರು ಪತ್ತನಾಜೆಯ ದಿನ ಮನೆಗೆ ಬರುತ್ತಾರೆ ಎಂಬ ಮಾತು ತುಳುವನಾಡಿನಲ್ಲಿ ಚಾಲ್ತಿಯಲ್ಲಿದೆ. 
  • ಪತ್ತನಾಜೆಯಂದು ದೇವರು ಮನೆಗೆ ಬಂದು ಮನೆಯ ಹಿರಿ *ಮಗನನ್ನು ತೂಗುತ್ತಾರೆ ಅಂತೆ, ಅವರು ತೂಗುವಾಗ ಹೆಚ್ಚು ತೂಕ ಇರಲು ಅವನಿಗೆ ಹಲಸಿನ ಗುಜ್ಜೆಯ ಪದಾರ್ಥ ಮಾಡಿಕೊಡಬೇಕಂತೆ.
  • ಪತ್ತನಾಜೆ ಬರುವ ಹೊತ್ತಿಗೆ ಜೇನು ನೋಣಗಳು ಜೇನು ತುಪ್ಪ ಖಾಲಿ ಮಾಡುತ್ತವೆ,(ತೊಡುವೆ, ಕೋಲು ಜೇನು ಇತ್ಯಾದಿಗಳು) ಅದಕ್ಕಾಗಿ ಪತ್ತನಾಜೆಯ ಮೊದಲು ಜೇನು ತೆಗೆಯಬೇಕು.
  • *ಪತ್ತನಾಜೆಯ ನಂತರ ಯಕ್ಷಗಾನ ಆಟ ಆಡುವಂತಿಲ್ಲ, ತಾಳಮದ್ದಳೆಯನ್ನು ನಡೆಸಬಹುದು.

ಮುಕ್ತಾಯ:

ಪತ್ತನಾಜೆಯು  ಪ್ರಕೃತಿಯನ್ನು ಆರಾಧಿಸುವ ಒಂದು ಬಗೆಯ ವಿಶೇಷ ದಿನ.ಭತ್ತ ಕೃಷಿಯ ಹಿನ್ನೆಲೆಯಾಗಿ ಮೂಡಿಬಂದ ಹಬ್ಬವಾಗಿ ಪತ್ತನಾಜೆ ಕಂಡುಬರುತ್ತದೆ. ಪ್ರಕೃತಿಯೊಂದಿಗೆ ಲೀನವಾಗಿರುವ ದೈವ, ದೇವರುಗಳ ಅರಾಧನೆ  ಮಾಡಿಕೊಂಡು ಬರುತ್ತಿರುವುದು ಮೆಚ್ಚುವಂತಹುದು.  ದೇವರ ಬಲಿ, ಭೂತ ಕೋಲ, ತುಳುನಾಡಿನ ಜನಪದ ನಲಿಕೆ, ಯಕ್ಷಗಾನಗಳಿಗೆಲ್ಲ ವಿರಾಮ ನೀಡುವ ದಿನವಾಗಿದೆ. ಇದು ಬರಿ ದಿನದ ಗಡುವಾಗದೆ ಮಾನಸಿಕ, ದೈಹಿಕವಾಗಿ ತುಳುವ ವ್ಯಕ್ತಿಯೊಬ್ಬನನ್ನು ಋತುಮಾನಕ್ಕೆ ಅನುಸಾರವಾಗಿ ಮುಂದೆ ಬರುವ ಕೃಷಿಕೆಲಸಗಳಿಗೆ ಒಗ್ಗಿಸಿಕೊಳ್ಳುವ ವಿಶೇಷ ಆಚರಣೆ. ಈ ಮಳೆ, ನೆಲ, ಕಾಲದ ಆಚರಣೆಯನ್ನು ಉಳಿಸಿ ಬೆಳೆಸುವುದು  ಪ್ರತಿಯೊಬ್ಬನ ತುಳುವ ನಾಡಿನ ಪ್ರಜೆಯ ಕರ್ತವ್ಯವಾಗಿದೆ.

ಲೋಕೇಶ ಕುಂಚಡ್ಕ
ಸಂಶೋಧನ ವಿದ್ಯಾರ್ಥಿ
ಮಂಗಳೂರು ವಿ ವಿ

ಕಾಮೆಂಟ್‌ಗಳಿಲ್ಲ: